Pages

Showing posts with label Kannada. Show all posts
Showing posts with label Kannada. Show all posts

Wednesday, November 1, 2017

ಜಾಗೃತಿ



ಜಾಗೃತಿ

ಕನ್ನಡಿಗ ಕನ್ನಡಿಗ ಜಾಗೃತನಾಗು ಭರದಿಂದ
ಪರಜಿಹ್ವಾವಲಂಬನೆಯಿಂದ ಮುಕ್ತನಾಗು ತ್ವರೆಯಿಂದ
ಉಳಿಸು ಬೆಳೆಸು ನೀ ಕನ್ನಡವ ಎಲ್ಲೆಲ್ಲೂ ಸಾರುತ
ಕನ್ನಡಾಂಬೆಯ ಪಾದಗಳಿಗೆ ಅನುದಿನವು ನಮಿಸುತ || ೧ ||

ನಾಚಿಕೆ ನಾಡಿನ ನಾಲಿಗೆ ಮೇಲೆ ನಿನಗಿಂದು ಏತಕೆ?
ಕನ್ನಡ ಕಲಿಗಳ ಕವಿಗಳ ಕರೆಗಳು ಕರ್ಣಕೆ ಕರ್ಕಶವೇ?
ಮಲತಾಯಿಯ ಮೊಲೆಹಾಲಿನ ಮೋಡಿಯು  ಮತಿಯನು ಮಂದಿಸಿತೆ?
ಅಮ್ಮನು ಉಣಬಡಿಸಿದ ಅಗ್ರನುಡಿಯು ಅಪವ್ಯಯವಾಯಿತೇ? || ೨ ||

ಆಷಾಡಭೂತಿಯಂತೆ ಮೌನಮೃಗವಾಗದೆ
ಸೂರ್ಯನಕುದುರೆಗೆ ಅರುಣಾನಿದ್ದಂತೆ ಮುನ್ನುಗ್ಗು ಕಣಕೆ
ಉಯ್ಯಾಲೆಯಂತೆ ಅಳೆಯುವ ಮನವನು ಅಂಕೆಯಲ್ಲಿರಿಸಿ
ಪಲ್ಲಟಗೊಳಿಸು ದಿವ್ಯಭಾಷೆಗೆ ಆವರಿನಿಸಿಹ ಗೋಡೆಯ || ೩ ||

ಮೈಸೂರು ಮಲ್ಲಿಗೆ ಜಾಜಿ ಇರುವಂತಿಗೆ
ಪುಷ್ಪರಾಣಿಯ ಹೂಗೊಂಚಲು ಚೈತನ್ಯ ಪೂಜೆಗೆ
ಶೀಲಾಲತೆಯ ಮಲ್ಲಿಗೆಯ ಮಾಲೆ ಸಂಜೆ ಹಾಡೊಂದಿಗೆ
ತೆರೆದು ಬಾಗಿಲ ಬರಮಾಡಿಕೊ ಕನ್ನಡ ಮಣ್ಣಿನ ವಾಸನೆ   || ೪ ||

ಜ್ಞಾನ ದೀಪವ ಬೆಳಗಿಸಿ ಮೈಮನ ರಂಜಿಪ
ನಾಕುತಂತಿಯ ನಾದಲೀಲೆಗೆ ಜೀವಲಹರಿಯ ತುಂಬುವ
ಹಿಮವದ್ಗೋಪಸಿರಿಯ ಮುರಳಿ ನಾದದೊಂದಿಗೆ
ಭೂಮಿಗೀತೆಯ ಹಡುತಲಿ ಕನ್ನಡ ಬಾವುಟ ಹಾರಿಸು  || ೫ ||

-  ಶ್ರೀಧರ ಚಕ್ರವರ್ತಿ